ಜೀವನದಲಿ ಯಶಸ್ವಿ ವ್ಯಕ್ತಿಯಾಗುವುದು ಎಲ್ಲಕಿಂತ ಮೊದಲು ನಮ್ಮ ಆದ್ಯತೆ ಆಗಬೇಕು. ‘ಏನಾದರೂ ಆಗು ಮೊದಲು ನೀ ಮಾನವನಾಗು’ ಯಂಬ ಕವಿವಾಣಿಯಂತೆ ಮಾನವನಾಗಲು ಶಿಕ್ಷಣ ಆತ್ಯಗತ್ಯ.

ಒಬ್ಬರ ಜೀವನ ಸುಧಾರಿಸಲು ಬದಲಿಸಲು ಉನ್ನತಿಯೆಡೆಗೆ ಕೊಂಡೊಯ್ಯಲು ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಮಗುವಿಗೆ ಶಿಕ್ಷಣ ಮನೆಯಿಂದಲೇ ಪ್ರಾರಂಭವಾಗುತ್ತದೆ. ಇದು ಜೀವಮಾನದ ಪ್ರಕ್ರಿಯೆಯಾಗಿದ್ದು ಸಾವಿನೊಂದಿಗೆ ಕೊನೆಗೊಳ್ಳುತ್ತದೆ.

ಶಿಕ್ಷಣವು ವ್ಯಕ್ತಿಯ ಜೀವನದ ಗುಣಮಟ್ಟವನ್ನು ಖಂಡಿತವಾಗಿ ನಿರ್ಧರಿಸುತ್ತದೆ. ಜ್ಞಾನ ಕೌಶಲ್ಯಗಳನ್ನು ಬೆಳೆಸುತ್ತದೆ.ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.

ಶಿಕ್ಷಣವು ನಮಗೆ ಔಪಚಾರಿಕ ಹಾಗು ಅನೌಪಚಾರಿಕವಾಗಿ ದೊರೆಯುತ್ತದೆ. ಶೈಕ್ಷಣಿಕ ವಿದ್ಯಾ ಸಂಸ್ಥೆಗಳ ಮೂಲಕ ದೊರೆಯುವ ಒಂದು ನಿರ್ದಿಷ್ಟ ಗುರಿ ಉದ್ದೇಶದೊಂದಿಗೆ ಔಪಚಾರಿಕ ಶಿಕ್ಷಣವಾಗಿ ನಿರ್ವಹಿಸುತ್ತದೆ.

ಜೀವನ ನಿರ್ವಹಣೆಗಾಗಿ ಉದ್ಯೋಗಕ್ಕಾಗಿ ಹೆಚ್ಚಿನ ಸಂಬಳದ ಕೌಶಲ್ಯ ಕಲಿಸಲು ಔಪಚಾರಿಕ ಶಿಕ್ಷಣವು ಮುಖ್ಯ.ಪ್ರಾರಂಭಿಕವಾಗಿ ಓದುವ ಬರೆಯುವ ಸಾಮರ್ಥ್ಯ ಬೆಳೆಸುತ್ತದೆ.

ಶಿಕ್ಷಣವು ಜನರನ್ನು ಸಾಕ್ಷರರನ್ನಾಗಿ ಮಾಡುತ್ತದೆ.ಶಿಕ್ಷಣವು ವ್ಯಕ್ತಿಯಲ್ಲಿ ಸಂವಹನ ಕೌಶಲ ಬೆಳೆಸುತ್ತದೆ.ಈ ಯುಗದಲ್ಲಿ ವ್ಯಕ್ತಿಯನ್ನು ಉತ್ತಮ ತಂತ್ರಜ್ಞಾನದ ಬಳಕೆದಾರನಾಗಿ ಮಾಡಿಸುತ್ತದೆ. ಶಿಕ್ಷಣದ ಸಹಾಯದಿಂದ ಜನರು ಹೆಚ್ಚು ಪ್ರಬುದ್ಧರಾಗುತ್ತಾರೆ

ಜನರಿಗೆ ಸಮರ್ಪಕವಾಗಿ ಅಭಿಪ್ರಾಯ ವ್ಯಕ್ತಪಡಿಸಲು ನೆರವಾಗುತ್ತದೆ. ಅನೌಪಚಾರಿಕ ಶಿಕ್ಷಣವು ಮನೆಯಲ್ಲಿ ಸಮಾಜದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಾವು ಬದುಕುವ ಸಮಾಜದಲ್ಲಿ ನಮಗೆ ಅರಿವಿಲ್ಲದೆ ನಮ್ಮ ಒಳಗೆ ಬದಲಾವಣೆಗೆ ಕಾರಣವಾಗುತ್ತದೆ.

ವ್ಯಕ್ತಿಯು ಸಮಾಜದಲ್ಲಿ ತಮ್ಮವರೊಂದಿಗೆ ಕುಟುಂಬದವರೊಂದಿಗೆ ಇತರರೊಂದಿಗೆ ಹೊಂದಾಣಿಕೆಯಿಂದ ಸಹಬಾಳ್ವೆ ನಡೆಸಲು ಶಿಕ್ಷಣ ಅಗತ್ಯ. ಸಮಾಜದಲ್ಲಿ ವಿದ್ಯಾವಂತರು ಹಾಗು ಅವಿದ್ಯಾವಂತರು ಸಾಮಾನ್ಯವಾಗಿ ಬದುಕುತ್ತಿದ್ದಾರೆ ಎಂದರೆ ಕೇವಲ ಔಪಚಾರಿಕ ಶಿಕ್ಷಣ ಮಾತ್ರವಲ್ಲ ಅನೌಪಚಾರಿಕ ಶಿಕ್ಷಣವು ನಮ್ಮ ವ್ಯಕ್ತಿತ್ವ ನಿರ್ಧರಿಸುತ್ತದೆ ಎಂದಾಯಿತು.

ಶಿಕ್ಷಣವೇ ಶಕ್ತಿ’ ಎಂಬ ದಾರ್ಶನಿಕರ ಮಾತನ್ನು ಉಲ್ಲೇಖಿಸುತ್ತಾ ಜೀವನದಲ್ಲಿ ನಾವು ಪಡೆದ ಶಿಕ್ಷಣವು ಉನ್ನತಿ ಗೆ ಕಾರಣವಾಗಬೇಕೇ ಹೊರತು ಅವನತಿಗೆ ಮೂಲವಾಗಬಾರದು.

ಶಿಕ್ಷಣವು ಕೇವಲ ಉದ್ಯೋಗ ಪಡೆಯಲು ಅಲ್ಲ, ಪ್ರಜಾವಂತ ಸುಶಿಕ್ಷಿತ ನಾಗರೀಕನಾಗಿ ಬದುಕಿ ಬಾಳಲು ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮಾಹಿತಿ ತುಂಬಿಸುವ ಕೆಲಸ ಮಾಡದೇ ಜೀವನದ ಪ್ರತಿ ಹಂತದಲ್ಲಿಯೂ ಸುಖ ದುಃಖಗಳನ್ನು ಸಮಾನವಾಗಿ ಎದುರಿಸುವ ತಾನು ಬದುಕಿ ಪರರನ್ನು ಬಾಳ ಬಿಡುವ ಯೋಗ್ಯ ಪ್ರಜೆಗಳನ್ನು ನಿರ್ಮಾಣ ಮಾಡಲಿ.

-By Vidhya-Molahalli School